ಶನಿವಾರ, ಆಗಸ್ಟ್ 21, 2010

ರತ್ನಾಕರಶತಕ - ೬

ಮತ್ತಾ ಕಲ್ಲನೆ ಸೋದಿಸಲ್ಕನಕಮಂ ಕಾಣ್ಬಂತೆ ಪಾಲಂ ಕ್ರಮಂ-
ಬೆತ್ತೊಳ್ಪಿಂ ಮಥಮಂ ಗೆಯಲ್ಘೃತಮುಮಂ ಕಾಣ್ಬಂತೆ ಕಾಷ್ಠಂಗಳಂ ||
ಒತ್ತಂಬಂ ಪೊಸೆದಗ್ನಿ ಕಾಣ್ಬ ತೆರದಿಂ ಮೆಯ್ಬೇರೆ ಬೇರಾನೆನು-
ತ್ತಿತ್ತಭ್ಯಾಸಿಸಲೆನ್ನ ಕಾಣ್ಬುದರಿದೇ ರತ್ನಾಕರಾಧೀಶ್ವರಾ ||೬||


ಕಲ್ಲನ್ನು ಮತ್ತೆ ಮತ್ತೆ ಶೋಧಿಸಿದ ನಂತರ ಚಿನ್ನವನ್ನು ಕಾಣುವಂತೆ, ಹಾಲನ್ನು ಕ್ರಮಬದ್ಧವಾಗಿ ಕಡೆದಾಗ ತುಪ್ಪವನ್ನು ಕಾಣುವಂತೆ, ಕಟ್ಟಿಗಳನ್ನು ಉಜ್ಜಿದಾಗ ಅಗ್ನಿಯು ಕಾಣುವರೀತಿ ಶರೀರವು ಬೇರೆ ನಾನು ಬೇರೆಯೆಂದು ಅಭಾಸಮಾಡಲು ನನ್ನನ್ನು ಕಾಣಲು ಸಾಧ್ಯಾವಿಲ್ಲವೇ?

ಗುರುವಾರ, ಆಗಸ್ಟ್ 19, 2010

ರತ್ನಾಕರಶತಕ - ೫

ಕಲ್ಲೊಳ್ತೋರ್ಪ ಪೊಗರ್ಸುವರ್ಣದ ಗುಣಂ ಕಾಷ್ಠಂಗಳೊಳ್ತೋರ್ಪ ಕೆ-
ಚ್ಚೆಲ್ಲಾ ಕಿಚ್ಚಿನ ಚಿಹ್ನವಾ ಕೆನೆಯಿರಲ್ಪಾಲೊಳ್ಘೃತಚ್ಚಾಯೆಯೆಂ- ||
ದೆಲ್ಲರ್ ಬಣ್ಣಿಪರೆಂತುಟೀ ತನುವಿನೊಳ್ ಚೈತನ್ಯಮುಂ ಬೋಧಮುಂ |
ಸೊಲ್ಲುಂ ಜೀವಗುಣಂಗಳೆಂದರುಪಿದೈ ರತ್ನಾಕರಾಧೀಶ್ವರಾ ||೫||


ಕಲ್ಲಿನಲ್ಲಿ ಕಾಣುವ ಹೊಳಪು ಚಿನ್ನದ ಗುಣ. ಕಟ್ಟಿಗೆಯಲ್ಲಿ ಕಾಣುವ ಗಟ್ಟಿತನವೆಲ್ಲಾ ಬೆಂಕಿಯ ಚಿಹ್ನೆಯಾಗಿದೆ. ಹಾಲಿನಲ್ಲಿರುವ ಕೆನೆಯು ತುಪ್ಪದ ಕುರುಹೆಂದು ಎಲ್ಲರೂ ಹೇಳುವರು. ಅಂತೆಯೇ, ಶರೀರದಲ್ಲಿರುವ ಚೈತನ್ಯವು, ಜ್ಞಾನವೂ, ವಚನವೂ ಜೀವದ ಗುಣಗಳಾಗಿರುತ್ತವೆ.

ಮಂಗಳವಾರ, ಆಗಸ್ಟ್ 17, 2010

ರತ್ನಾಕರಶತಕ - ೪

ಅರಿವಿಂದೀಕ್ಷಿಸಲಕ್ಕು ಮಾತ್ಮನಿರವಂ ದೇಹಂಬೊಲೀ ಕಣ್ಗೆ ತಾಂ|
ಗುರಿಯಾಗಂ ಶಿಲೆಯೊಳ್ಸುವರ್ಣಮರಲೊಳ್ಸೌರಭ್ಯಮಾ ಕ್ಷೀರದೊಳ್ ||
ನರು ನೆಯ್ಕಾಷ್ಠದೊಳಗ್ನಿಯಿರ್ಪತೆರದಿಂದೀ ಮೆಯ್ಯಳೊಂದಿರ್ಪನೆಂ-
ದರಿದಭ್ಯಾಸಿಸೆ ಕಾಣ್ಗುಮೆಂದರುಪಿದೈ ರತ್ನಾಕರಾಧೀಶ್ವರಾ ||೪||



ಆತ್ಮನ ಇರುವನ್ನು ಅರಿವಿನಿಂದ ನೋಡಬೇಕು. ದೇಹದಲ್ಲಿರುವ ಕಣ್ಣಿನಿಂದ ನೋಡಿದರೆ ಆತ್ಮನು ಕಾಣುವುದಿಲ್ಲ. ಕಲ್ಲಿನಲ್ಲಿ ಚಿನ್ನ, ಹೂವಿನಲ್ಲಿ ಸುಗಂಧ, ಹಾಲಿನಲ್ಲಿ ಕೆನೆ ಮತ್ತು ಬೆಣ್ಣೆ, ಕಟ್ಟಿಗೆಯಲ್ಲಿ ಬೆಂಕಿಯಿರುವ ರೀತಿಯಲ್ಲೇ ಶರೀರದಲ್ಲಿ ಆತ್ಮನು ಸೇರಿದ್ದಾನೆಂದು ಅರಿತು ಸಾಧನೆಯಲ್ಲಿ ತೊಡಗಿದರೆ ಆತ್ಮನ ಗೋಚರವಾಗುತ್ತದೆ.

ಸೋಮವಾರ, ಆಗಸ್ಟ್ 16, 2010

ರತ್ನಾಕರಶತಕ - ೩

ಮಿಗೆ ಷಡ್ದ್ರವ್ಯಮನಸ್ತಿಕಾಯಮೆನಿಪೈದಂ ತತ್ತ್ವವೇಳಂ ಮನಂ-
ಬುಗಲೊಂಬತ್ತು ಪದಾರ್ಥಮಂ ತಿಳಿದೊಡಂ ತನ್ನಾತ್ಮನೀ ಮೆಯ್ಯ ದಂ
ದುಗದಿಂ ಬೇರೊಡಲೇನಚೇತನಮೆ ಜೀವಂ ಚೇತನಂ ಜ್ಞಾನರೂ
ಪಿಗಡಾಯೆಂದರಿದಿರ್ದನೇ ಸುಖಿಯಲಾ ರತ್ನಾಕರಾಧೀಶ್ವರಾ ||೩||


ಷಡ್ದ್ರವ್ಯ - ಆರು ದ್ರವ್ಯಗಳು (ಜೀವ, ಪುದ್ಗಲ, ಧರ್ಮ, ಅಧರ್ಮ, ಆಕಾಶ ಮತ್ತು ಕಾಲ)
೫ ಅಸ್ತಿಕಾಯ - ಜೀವಾಸ್ತಿಕಾಯ, ಪುದ್ಗಲಾಸ್ತಿಕಾಯ, ಧರ್ಮಾಸ್ತಿಕಾಯ, ಅಧರ್ಮಾಸ್ತಿಕಾಯ ಮತ್ತು ಆಕಾಶಾಸ್ತಿಕಾಯ
೭ ತತ್ವಗಳು - ಜೀವತತ್ವ, ಅಜೀವತತ್ವ, ಆಸ್ರವತತ್ವ, ಬಂಧತತ್ವ, ಸಂವರತತ್ವ, ನಿರ್ಜರತತ್ವ ಮತ್ತು ಮೋಕ್ಷತತ್ವ
೯ ಪದಾರ್ಥಗಳು - ಜೀವ, ಅಜೀವ, ಆಸ್ರವ, ಬಂಧ, ಸಂವರ, ನಿರ್ಜರ, ಮೋಕ್ಷ, ಪಾಪ ಮತ್ತು ಪುಣ್ಯ

೬ ದ್ರವ್ಯಗಳು, ೫ ಅಸ್ತಿಕಾಯಗಳು, ೭ ತತ್ವಗಳು ಮತ್ತು ೯ ಪದಾರ್ಥಗಳನ್ನು ಅರ್ಥೈಸಿಕೊಂಡು ತನ್ನ ಆತ್ಮನು ಶರೀರದ ಬಾಧೆಯಿಂದ ಬೇರೆಯಾಗಿರುವನು, ಶರೀರವು ಅವೇತನವಾಗಿದೆ. ಜೀವನು ಜ್ಞಾನರೂಪನೂ, ಚೇತನವಾಗಿದೆಯೆಂದು ತಿಳಿದವನೇ ಸುಖಿ.

ಭಾನುವಾರ, ಆಗಸ್ಟ್ 15, 2010

ರತ್ನಾಕರಶತಕ - ೨

ತತ್ತ್ವಪ್ರೀತಿ ಮನಕ್ಕೆ ಪುಟ್ಟಲದು ಸಮ್ಯಗ್ದರ್ಶನಂ ಮತ್ತಮಾ |
ತತ್ತ್ವಾರ್ಥಂಗಳನೊಲ್ದು ಭೇದಿಪುದು ಸಮ್ಯಗ್ಜ್ಞಾನಮಾ ಬೋಧದಿಂ||
ಸತ್ತ್ವಂಗಳ್ಕಿಡದಂತುಟೋವಿ ನೆಡೆಯಲ್ಸಮ್ಯಕ್ಚರಿತ್ರಂ ಸುರ-|
ತ್ನತ್ನಂ ಮೂರಿವು ಮುಕ್ತಿಗೆಂದರುಪಿದೈ ರತ್ನಾಕರಾಧೀಶ್ವರಾ ||೨||


ಜೀವಾಜೀವಾದಿ ತತ್ವಗಳ ಬಗ್ಗೆ ಮನಸ್ಸಿನಲ್ಲಿ ಪ್ರೀತಿ ಹುಟ್ಟುವುದು ಸಮ್ಯಗ್ದರ್ಶನ. ಆ ತತ್ವಗಳನ್ನು ಅರಿತು, ಅವುಗಳನ್ನು ವಿಭಾಗಿಸಿ ಅರಿಯುವುದು ಸಮ್ಯಜ್ಞಾನವಾಗಿದೆ ಮತ್ತು ಇಂತಹ ಜ್ಞಾನದಿಂದ ತತ್ವಕ್ಕೆ ಲೋಪಬರದ ರೀತಿ ನೆಡೆಯುವುದು ಸಮ್ಯಕ್ಚಾರಿತ್ರವಾಗಿದೆ. ಈ ಮೂರು ರತ್ನಗಳು (ರತ್ನತ್ರಯ) ಮುಕ್ತಿಗೆ ಕಾರಣ.

ಶನಿವಾರ, ಆಗಸ್ಟ್ 14, 2010

ರತ್ನಾಕರಶತಕ - ೭

ಅಂಗುಷ್ಠಂ ಮೊದಲಾಗಿ ನೆತ್ತಿವರೆಗಂ ಸರ್ವಾಂಗಸಂಪೂರ್ಣನು-
ತ್ತುಂಗಜ್ಞಾನಮಯಂ ಸುದರ್ಶನಮಯಂ ಚಾರಿತ್ರತೇಜೋಮಯಂ ||
ಮಾಗಲ್ಯ ಮಹಿಮಂ ಸ್ವಯಂಭು ಸುಖಿ ನಿರ್ಬಾಧಂ ನಿರಾಪೇಕ್ಷಿ ನಿ-
ಮ್ಮಂಗಂಬೊಲ್ಪರಮಾತ್ಮನೆಂದರುಪಿದೈ ರತ್ನಾಕರಾಧೀಶ್ವರಾ ||೭||

ರತ್ನಾಕರಶತಕ - ೧

ಶ್ರೀರಾಗಂ ಸಿರಿಗಂಪು ಮಾಲೆ ಮಣಿಹಾರಂ ವಸ್ತ್ರಮಂಗಕ್ಕಳಂ-
ಕಾರಂ ಹೇಯಮಿವಾತ್ಮತತ್ವ ರುಚಿಬೋಧೋದ್ಯಚ್ಚರಿತ್ರಂಗಳೀ ||
ತ್ರೈರತ್ನಂ ಮನಸಿಂಗೆ ಸಿಂಗರಮುಪಾದೇಯಂಗಳೆಂದಿತ್ತೆ ಶೃಂ-
ಗಾರಶ್ರೀಕವಿಹಂಸರಾಜನೊಡೆಯಾ ರತ್ನಾಕರಾಧೀಶ್ವರಾ ||೧||


ತ್ರೈರತ್ನಂ - ಸಮ್ಯಗ್ದರ್ಶನ,ಸಮ್ಯಜ್ಞಾನ ಮತ್ತು ಸಮ್ಯಕ್ಚಾರಿತ್ರ
ಶೃಂಗಾರಶ್ರೀಕವಿಹಂಸರಾಜ - ರತ್ನಾಕರವರ್ಣಿಯ ಮತ್ತೊಂದು ಹೆಸರು (ಬಿರುದು).